Thursday, January 15, 2009

ಶ್ಲೋಕಗಳು

ಓಂ ಸಹನಾವವತು ಸಹನೌಭುನಕ್ತು
ಸಹವೀರ್ಯಂ ಕರವಾವಹೈ
ತೇಜಸ್ವಿನಾ ವದೀತಮಸ್ತುಮಾವಿದ್ವಿಶಾವಹೈ
ಓಂ ಶಾಂತಿಃ ಶಾಂತಿಃ ಶಾಂತಿಃ

ಅಸತೋಮಾ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
ಓಂ ಶಾಂತಿಃ ಶಾಂತಿಃ ಶಾಂತಿಃ

ಗುರುರ್ಬ್ರಹ್ಮ ಗುರುರ್ವಿಷ್ಣುಃ
ಗುರುರ್ದೇವೋ ಮಹೇಶ್ವರಃ
ಗುರುಃ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ

ಓಂ ಪೂರ್ಣಮದಂ ಪೂರ್ಣಮಿದಂ
ಪೂರ್ಣತ್ ಪೂರ್ಣಮುದಚ್ಯತೆ
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಶ್ಯತೆ
ಓಂ ಶಾಂತಿಃ ಶಾಂತಿಃ ಶಾಂತಿಃ

ಸರ್ವೇ ಭವಂತು ಸುಖಿನ:
ಸರ್ವೇ ಸಂತು ನಿರಾಮಯ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖ ಭಾಗ್ಭವೇತ್
ಓಂ ಶಾಂತಿಃ ಶಾಂತಿಃ ಶಾಂತಿಃ

ಗಾಯತ್ರಿ ಮಂತ್ರ

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿಧಿಯೋ ಯೋನಃ ಪ್ರಚೋದಯಾತ್

ಪತಂಜಲಿ ಸ್ತೋತ್ರ

ಯೋಗೇನ ಚಿತ್ತಸ್ಯ ಪದೇನ ವಾಚ
ಮಲಂ ಶರೀರಸ್ಯಚ ವೈದ್ಯಕೇನ
ಯೋಪಾಕರೋತ್ತಮ್ ಪ್ರವರಂ ಮುನೀನಾಂ
ಪತಂಜಲೀಂ ಪ್ರಾಂಜಲೀಂ ರಾನತೊಸ್ಮಿ
ಆಬಾಹು ಪುರುಷಾಕಾರಂ ಶಂಖ ಚಕ್ರಸಿಧಾರಣಂ
ಸಹಸ್ರ ಶಿರಸಂ ಶ್ವೇತಂ ಪ್ರಣಮಾಮಿ ಪತಂಜಲಿಂ
ಓಂ ಶಾಂತಿಃ ಶಾಂತಿಃ ಶಾಂತಿಃ

ಪ್ರಾಣಾಯಾಮ ಮಂತ್ರ

ಓಂ ಪ್ರಾಣಸ್ಯೇದಂ ವಶೇಸರ್ವಂ ತ್ರಿಧೀವೇಯತ್ ಪ್ರತಿಷ್ಟಿತಂ
ಮಾತೇವ ಪುತ್ರಾನ್ ರಕ್ಷಸ್ವ ಶ್ರೀಶ್ಚ್ ಪ್ರಜ್ನ್ಯಾಶ್ಚ ವಿದೇಹಿನಾಹಿತಿ
ಓಂ ಶಾಂತಿಃ ಶಾಂತಿಃ ಶಾಂತಿಃ

ಮಹಾ ಮೃತ್ಯುಂಜಯ ಮಂತ್ರ

ಓಂ ತ್ರೆಂಬಕಮ್ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವಬಂಧನಾತ್ ಮೃತ್ಯೊರ್ಮುಕ್ಷೀಯ ಮಾಂಮೃತಾಥ್

ತಾಯಿ ಮತ್ತು ತೋಳ

ಒಂದು ಮುಂಜಾನೆ, ಹಸಿದ ತೋಳವೊಂದು ಊರಾಚೆಯಿದ್ದ ಒಂಟಿ ಮನೆಯ ಹಿಂದೆ ಹೊಂಚು ಹಾಕಿ ಕುಳಿತಿದ್ದಾಗ, ಮನೆಯ ಒಳಗೆ ಒಂದು ಮಗು ಅಳುತ್ತಿರುವ ಸದ್ದು ಕೇಳಿಸಿತು. ನಂತರ ಮಗುವಿನ ತಾಯಿ, ಅಳು ನಿಲ್ಲಿಸುತ್ತೀಯೊ ಇಲ್ಲ ನಿನ್ನನ್ನು ತೋಳನಿಗೆ ಕೊಟ್ಟು ಬಿಡ್ತೀನಿ ನೋಡು ಎಂದು ಗದರಿದ್ದು ಕೇಳಿಸಿತು. ತೋಳ ಅನಾಯಾಸವಾಗಿ ಸಿಗುವ ಆಹಾರವನ್ನು ನೆನೆಸಿಕೊಂಡು ಖುಷಿಯಿಂದ ಮನೆಯ ಹಿಂಬಾಗದಲ್ಲಿ ಕಾಯುತ್ತಾ ಕುಳಿತಿತ್ತು. ಮಗು ಅಮ್ಮ ಗದರಿದರೂ ಇನ್ನೂ ಅಳುತ್ತಲೇ ಇತ್ತು, ತೋಳ ಇನ್ನೇನು ನನ್ನ ಆಹಾರ ಈಗ ಬರುತ್ತೆ, ಇನ್ನೊಂದು ಕ್ಷಣದಲ್ಲಿ ಬರುತ್ತೆ ಅಂತ ಹೊರಗೆ ಕಾಯುತ್ತಲೇ ಇತ್ತು. ರಾತ್ರಿಯ ಸಮಯಕ್ಕೆ ಮತ್ತೆ ತಾಯಿಯ ಧ್ವನಿ ಕೇಳಿಸಿತು, ಮನೆಯ ಹಿಂಬಾಗದ ಕಿಟಕಿಯ ಬಳಿ ಕುಳಿತು ತಾಯಿ ಮಗುವಿಗೆ ಹಾಡನ್ನು ಹೇಳಿ ಮಲಗಿಸಲು ಪ್ರಯತ್ನಿಸುತಿದ್ದಳು. ಅಲ್ಲಿ ನೋಡು ಮಗು ಅಲ್ಲಿ, ತೊಳ ನಿನಗೆ ಎನೂ ಮಾಡುವುದಿಲ್ಲ, ಅಪ್ಪ ಬಂದು ತೋಳನನ್ನು ಸಾಯಿಸುತ್ತಾರೆ, ನೀನೇನು ಹೆದರಿಕೊ ಬೇಡ ಈಗ ನೀನು ಮಲಗಿಕೊ ಎಂದು ಹೇಳುವ ಹೊತ್ತಿಗೆ, ಅಪ್ಪ ತನ್ನ ನಾಯಿಗಳೊಂದಿಗೆ ಮನೆಗೆ ಬರುವುದನ್ನು ಕಂಡ ತೋಳ, ತನ್ನ ಕಾಲಿಗೆ ಬುದ್ದಿ ಹೇಳಿ ತನ್ನ ಜೀವ ಉಳಿಸಿಕೊಂಡಿತು.
ನೀತಿ: ಕೇಳಿದ್ದೆಲ್ಲವನ್ನು ಸತ್ಯವೆಂದು ನಂಬಬಾರದು.

ಏಡಿಮರಿ ಮತ್ತು ಅದರ ಅಮ್ಮ

ಏಡಿಮರಿ ನಡಿಯುತ್ತಿರುವದನ್ನು ನೋಡಿ, “ಯಾಕೊ ಹಾಗೆ ಸೊಟ್ಟ ಕಾಲು ಹಾಕ್ಕೊಂಡು ಒಂದು ಪಕ್ಕಾ ವಾಲಿಕೊಂಡು ನಡಿತೀಯಾ, ಯಾವಾಗಲೂ ನೇರವಾಗಿ ಹೆಜ್ಜೆಹಾಕಬೇಕು ಕಾಲಿನ ಬೆರಳುಗಳನ್ನು ಹೊರಗೆ ಚಾಚಿರಬೇಕು” ಎಂದು ಅಮ್ಮ ಏಡಿ ತನ್ನ ಮಗನಿಗೆ ಬುದ್ದಿ ಹೇಳಿದಾಗ,
”ಪ್ರೀತಿಯ ಅಮ್ಮ, ಹೇಗೆ ನಡೀಬೇಕು ಅಂತ ಸ್ವಲ್ಪ ತೋರಿಸ್ತಿಯಾ, ನಿನ್ನನ್ನು ನೋಡಿ ನಾನು ನಡೆಯುವುದನ್ನು ಕಲಿತುಕೊಳ್ಳುತ್ತೇನೆ” ಎಂದು ಏಡಿಮರಿ ಅಮ್ಮನಿಗೆ ಉತ್ತರಿಸಿತು.
ಸರಿ ಎಂದು ಅಮ್ಮ ಏಡಿ ತಾನು ಹೇಳಿದಂತೆ ನೇರವಾಗಿ ನಡೆಯಲು ಪ್ರಯತ್ನಿಸಿತು, ಆದರೆ ಏನೂ ಪ್ರಯೊಜನವಾಗಲಿಲ್ಲ, ಮಗ ಏಡಿ ಹೇಗೆ ಒಂದು ಕಡೆ ವಾಲಿಕೊಂಡು ನಡೆದಾಡುತಿತ್ತೊ ಹಾಗೆ ಅಮ್ಮ ಏಡಿ ಕೂಡ ನಡೆಯಿತು. ಅಮ್ಮ ಏಡಿ ಇನ್ನೂ ಮುಂದುವರೆಸಿ ತನ್ನ ಕಾಲ ಬೆರಳುಗಳನ್ನು ಹೊರಕ್ಕೆ ಚಾಚಲು ಪ್ರಯತ್ನಿಸಿ ಮಕಾಡೆ ಮುಗ್ಗರಿಸಿ ಬಿತ್ತು.
ನೀತಿ: ಬೇರೆಯವರಿಗೆ ಬುದ್ದಿ ಹೇಳುವ ಮೊದಲು ಹೇಳಿದ್ದನ್ನು ಸ್ವತಃ ಮಾಡಿತೊರಿಸಬಲ್ಲ ಶಕ್ತಿಯಿರಬೇಕು.

ತೋಳ ಮತ್ತು ಮೇಕೆ ಮರಿ

ಒಂದೂರಲ್ಲಿ ಒಂದು ಮೇಕೆ ಮರಿ ಇತ್ತು. ಆಗ ತಾನೆ ಮೂಡುತಿದ್ದ ತನ್ನ ಕೊಂಬಗಳನ್ನು ನೋಡಿ, ತಾನಾಗಲೇ ದೊಡ್ಡವನಾದೆ ಎಂದು ಜಂಬದಿಂದ ಮೆರೆದಿತ್ತು. ಒಂದು ದಿನ ಸಂಜೆ, ಹುಲ್ಲು ಮೇಯ್ದಾದ ನಂತರ ಎಲ್ಲಾ ಮೇಕೆಗಳು ಮನೆಯಕಡೆ ಹೊರಟವು. ತಾಯಿ ಮೇಕೆ ಮನೆಗೆ ಹೊಗಲು ಕರೆದದ್ದು ಕೇಳಿಸಿದರೂ ಕೇಳಿಸದಂತೆ, ಇನ್ನೂ ತಿನ್ನುತ್ತಿರುವಂತೆ ನಟಿಸಿತು. ಸ್ವಲ್ಪ ಹೊತ್ತಿನ ನಂತರ ತಲೆ ಎತ್ತಿ ನೋಡಿದರೆ, ಎಲ್ಲ ಮೇಕೆಗಳೂ ಆಗಲೇ ಮನೆಗೆ ಹೊರಟುಹೋಗಿದ್ದವು. ಮರಿ ಮೇಕೆಯೊಂದೆ ಹಿಂದೆ ಉಳಿದಿತ್ತು, ಸೂರ್ಯ ಆಗಲೆ ಮುಳುಗಲು ತಯಾರಿ ನಡೆಸಿದ್ದ, ಮರಗಳ ಉದ್ದುದ್ದ ನೆರಳನ್ನು ನೋಡಿ, ತೋಳನ ಭೀತಿಯಿಂದ ತರತರನೆ ನಡುಗಲಾರಂಭಿಸಿತು ಮೇಕೆ ಮರಿ. ಹೆದರಿಕೆಯಿಂದಲೇ ಅಮ್ಮಾ ಅಮ್ಮಾ ಎಂದು ಕೂಗುತ್ತಾ ಮನೆಯದಾರಿ ಹಿಡಿಯಿತು. ಮಾರ್ಗ ಮಧ್ಯದಲ್ಲಿ ಗಿಡಗಳ ಪೊದೆಯಿಂದ ತೋಳವೊಂದು ದುತ್ತನೆ ಮೇಕೆ ಮರಿಯ ಎದುರಿಗೆ ಬಂದು ನಿಂತಿತು. ತೋಳನನ್ನು ನೊಡಿದ ಮೇಕೆ ಮರಿ ತನ್ನ ಜೀವದ ಮೇಲಿನ ಆಸೆಯನ್ನು ಬಿಟ್ಟುಬಿಟ್ಟಿತು. ಆದರೂ ಸ್ವಲ್ಪ ದೈರ್ಯ ಮಾಡಿ, ನಡುಗುವ ದನಿಯಲ್ಲಿ, ತೋಳಣ್ಣ ನನ್ನನ್ನು ತಿನ್ನುವ ಮೊದಲು, ನಿನ್ನ ತುತ್ತೂರಿಯ ದನಿಗೆ ನನ್ನ ಕಾಲು ನೋಯುವಷ್ಟು ನೃತ್ಯ ಮಾಡಬೇಕೆಂಬದು ನನ್ನ ಕೊನೆ ಆಸೆ, ದಯವಿಟ್ಟು ನೆರೆವೇರಿಸಿಕೊಡುತ್ತೀಯಾ ಎಂದಿತು. ತೋಳನಿಗೂ ಮೇಕೆ ಮರಿಯನ್ನು ತಿನ್ನುವ ಮೊದಲು ಸ್ವಲ್ಪ ಮನರಂಜನೆ ಇರಲಿ ಎನಿಸಿ, ಆಗಲಿ ನಿನ್ನ ಆಸೆಯನ್ನು ನೆರವೇರಿಸುತ್ತೇನೆ ಎಂದು ಮೇಕೆ ಮರಿಗೆ ಹೇಳಿ, ತನ್ನ ತುತ್ತೂರಿ ತೆಗೆದು ನಿಧಾನವಾಗಿ ತಾನು ಊಟಮಾಡುವ ಮೊದಲು ಬಾರಿಸುವ ರಾಗವನ್ನು ಬಾರಿಸತೊಡಗಿತು.
ಇತ್ತ, ಮನೆಯ ಹಾದಿ ಹಿಡಿದಿದ್ದ ಮೇಕೆಗಳ ಗುಂಪು ತುಂಬಾ ಹೆಚ್ಚು ದೂರ ಹೋಗಿರಲಿಲ್ಲ, ಕುರುಬನ ನಾಯಿಗಳು ತೋಳನ ತುತ್ತೂರಿಯ ರಾಗವನ್ನು ಗುರುತಿಸಿ, ತೋಳ ಯಾವುದೊ ಮೇಕೆಯನ್ನು ಹಿಡಿದಿರಬೇಕೆಂದು ಒಡನೆಯೆ ಶಬ್ಧಬಂದ ಕಡೆ ನಾಯಿಗಳು ನುಗ್ಗಿದವು. ಇದ್ದಕ್ಕಿದ್ದಂತೆ ನಾಯಿಗಳ ದಾಳಿಯನ್ನು ಕಂಡು, ತೋಳ ತುತ್ತೂರಿಯನ್ನು ನಿಲ್ಲಿಸಿ ತನ್ನ ಕಾಲಿಗೆ ಬುದ್ದಿಹೇಳಿತು. ಜೀವ ಉಳಿಸಿಕೊಂಡ ತೋಳ, ಮೇಕೆ ಮರಿ ಕಂಡ ತಕ್ಷಣ ಮೊದಲು ಅದನ್ನು ತಿನ್ನದೇ, ತುತ್ತೂರಿ ಊದಿದ್ದಕ್ಕೆ ತನ್ನನ್ನು ತಾನೇ ಹಳಿದು ಕೊಂಡಿತು. ಇತ್ತ ಮೇಕೆ ಮರಿ ಮತ್ತೆ ಯಾವತ್ತೂ ಜಂಬ ಮಾಡದೇ, ತನ್ನ ತಾಯಿಯೊಡನೆ ಇರುವುದನ್ನು ಕಲಿಯಿತು.
ನೀತಿ: ನಾವು ಮಾಡಬೇಕಾದ ಕಾರ್ಯದಿಂದ ನಮ್ಮನ್ನು ಬೇರೆ ಯಾವುದೇ ಕಾರಣಗಳು ತಡೆಯಬಾರದು.

ಆಮೆ ಮತ್ತು ಬಾತುಕೊಳಿಗಳು

ನಿಮಗೆ ಗೊತ್ತೆ, ಅಮೆ ತನ್ನ ಮನೆಯನ್ನು ತನ್ನ ಬೆನ್ನ ಮೇಲೆ ಯಾವಗಲೂ ಹೊತ್ತು ತಿರುಗುತ್ತದೆ. ಅದು ಎಷ್ಟು ಪ್ರಯತ್ನಿಸಿದರೂ ಮನೆಯನ್ನು ಬಿಟ್ಟು ಇರಲಾರದು. ಒಮ್ಮೆ ಜ್ಯೂಪಿಟರ್ (ಗುರು ಗ್ರಹ) ಮದುವೆಗೆ ಅಮೆಗೆ ಅಮಂತ್ರಣ ಕಳಿಸಿದ್ದರೂ, ಅಮೆ ಮದುವೆಗೆ ಹೊಗದೆ ಸೋಮಾರಿಯಾಗಿ ಮನೆಯಲ್ಲೇ ಕುಳಿತಿತ್ತಂತೆ ಅದಕ್ಕೆ ಗುರು ಕೊಂಪಗೊಂಡು ನೀನು ಎಲ್ಲೇ ಹೊದರೂ ನಿನ್ನ ಮನೆಯನ್ನು ಜೊತೆಗೆ ಕರೆದೊಯ್ಯಿ ಎಂದು ಅಮೆಗೆ ಶಾಪ ಕೊಟ್ಟನಂತೆ.
ಬಹಳ ವರುಷಗಳ ನಂತರ, ಆಮೆಗೆ ಅಯ್ಯೊ ನಾನು ಗುರುವಿನ ಮದುವೆಗೆ ಹೋಗಬೇಕಾಗಿತ್ತು, ಹೊಗಿದ್ದರೆ ನಾನೂ ಮೊಲದ ಹಾಗೆ ವೇಗವಾಗಿ ಓಡಾಡಬಹುದಿತ್ತು, ಇಡೀ ಪ್ರಪಂಚವನ್ನು ಸುತ್ತಬಹುದಿತ್ತು. ಆಮೆಗೆ ತಾನೂ ಇಡೀ ಪ್ರಪಂಚವನ್ನು ಸುತ್ತಬೇಕೆಂಬ ಆಸೆ ಅದರೆ ತನ್ನ ಮನೆಯನ್ನು ಬೆನ್ನ ಮೇಲೆ ಮನೆಯನ್ನು ಹೊತ್ತುಕೊಂಡು ಪ್ರಪಂಚವನ್ನು ಎಲ್ಲಿ ಸುತ್ತಲು ಸಾದ್ಯ ಎಂದು ನಿರಾಶೆಯಾಯಿತು.
ಹೀಗಿರಬೇಕಾದರೆ ಒಂದು ದಿನ ಅಮೆಗೆ ಎರಡು ಬಾತುಕೋಳಿಗಳ ಪರಿಚಯವಾಯಿತು. ಆಮೆ ಬಾತುಕೋಳಿಗಳಿಗೆ ತನ್ನ ದುಃಖವನ್ನು ಹೇಳಿಕೊಂಡಿತು. ಅದಕ್ಕೆ ಬಾತುಕೋಳಿಗಳು, ನೀನೇನು ಯೋಚನೆ ಮಾಡಬೇಡ, ನಾವು ನಿನಗೆ ಸಹಾಯ ಮಾಡುತ್ತೇವೆ ಎಂದವು. ಅಲ್ಲಿಯೆ ಬಿದ್ದಿದ ಒಂದು ಕೋಲನ್ನು ತೋರಿಸಿ, ನಿನ್ನ ಬಾಯಿಂದ ಈ ಕೋಲನ್ನು ಕಚ್ಚಿ ಹಿಡಿದುಕೊ, ನಾವಿಬ್ಬರೂ ಈ ಕೋಲನ್ನು ಹಿಡಿದುಕೊಂಡು ಆಕಾಶದಲ್ಲಿ ಹಾರಿ, ನಿನಗೆ ಇಡೀ ಪ್ರಪಂಚವನ್ನು ತೋರಿಸುತ್ತೇವೆ. ಆದರೆ ಒಂದು ನೆನಪಿನಲ್ಲಿಡು, ಯಾವುದೇ ಕಾರಣಕ್ಕೂ ಮಾತಾಡಲು ಬಾಯಿತೆರೆಯಬೇಡ ಎಂದು ಬಾತುಕೋಳಿಗಳು ಹೇಳಿದ್ದನ್ನು ಕೇಳಿ, ಸಂತೋಷದಿಂದ ಅಮೆ ಅವರು ಹೇಳಿದ್ದಕ್ಕೆ ಒಪ್ಪಿಗೆಸೂಚಿಸಿತು.
ಆಮೆ ತನ್ನ ಬಾಯಿಂದ ಕೋಲನ್ನು ಕಚ್ಚಿ ಹಿಡಿಯಿತು, ಬಾತುಕೋಳಿಗಳು ಕೋಲಿನ ಎರಡು ತುದಿಗಳನ್ನು ಹಿಡಿದುಕೊಂಡು ಆಕಾಶಕ್ಕೆ ಹಾರಿದವು. ಆಗ ಅದೇ ತಾನೆ ಅಲ್ಲಿ ಹಾರುತಿದ್ದ ಕಾಗೆಯೊಂದು ಈ ದೃಶ್ಯವನ್ನು ನೊಡಿ, “ಖಂಡಿತ ಇದು ಅಮೆಗಳಿಗೆಲ್ಲಾ ರಾಜನಿರಬೇಕು” ಎಂದು ಉದ್ಗರಿಸಿತು. ಇದನ್ನು ಕೇಳಿಸಿಕೊಂಡ ಆಮೆ ಸುಮ್ಮನಿರಲಾರದೆ “ಯಾಕೆ ಖಂಡಿತವಾಗಿ…” ಎಂದು ಮಾತಾಡಲಾರಂಬಿಸಿದಾಗ ಕೋಲಿನ ಹಿಡಿತ ತಪ್ಪಿ ದೊಪ್ಪೆಂದು ಕೆಳಗೆ ಬಿದ್ದು ಸತ್ತು ಹೋಯಿತು.
ನೀತಿ: ಮೂರ್ಖ ಕುತೂಹಲ ಮತ್ತು ಜಂಬ ನಮ್ಮನ್ನು ದುರದೃಷ್ಟದತ್ತ ನೂಕುತ್ತವೆ.

ಬುದ್ಧಿವಂತ ತಾತ

ಒಮ್ಮೆ ವಯಸ್ಸಾದ ವೃದ್ದರು, ಕೆಲಸದಿಂದ ನಿವೃತ್ತರಾದ ಮೇಲೆ, ಒಂದು ಒಳ್ಳೆಯ ಜಾಗದಲ್ಲಿ ಮನೆ ಕೊಂಡುಕೊಂಡರೂ. ಇವರ ಮನೆಯ ಹತ್ತಿರದಲ್ಲೇ ಒಂದು ಶಾಲೆ ಇತ್ತು. ಬೇಸಿಗೆ ಕಳೆದು ಶಾಲೆ ಪುನರಾರಂಭವಾಯಿತು. ಶಾಲೆಯ ಮೂರು ತುಂಟ ಹುಡುಗರು, ಊಟವಾದ ಮೇಲೆ, ಪಕ್ಕದಲ್ಲಿದ್ದ ತಾತನ ಮನೆಯ ಮುಂದೆ ಇದ್ದ ಕಸದ ಡಬ್ಬವನ್ನು ಒದೆಯುವುದು, ಬಡಿಯುವುದು ಮಾಡುತಿದ್ದರು. ಕಸದ ಡಬ್ಬ ತುಂಟ ಹುಡುಗರ ತಬಲವಾಗಿತ್ತು.
ಗಲಾಟೆಯಿಂದ ಬೇಸತ್ತ ತಾತ, ಇವರಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿ, ಮಾರನೆ ದಿನ ಹುಡುಗರು ಬರುವುದನ್ನೇ ಕಾಯುತಿದ್ದರು. ಹುಡುಗರು ಬಂದು ಎಂದಿನಂತೆ ತಬಲಾ ಬಾರಿಸಲಾರಂಬಿಸಿದಾಗ, ತಾತ ಹೊರಗಡೆ ಬಂದು, ಹುಡುಗರೊಡನೆ ಪರಿಚಯ ಮಾಡಿಕೊಂಡರು. ನಿಮ್ಮ ವಯಸ್ಸಿನವನಾಗಿದ್ದಾಗ ನಾನು ಹೀಗೆ ಮಾಡುತಿದ್ದೆ, ನೀವು ತಬಲಾ ಬಾರಿಸುವುದನ್ನು ಕೇಳುವುದೇ ಆನಂದ ಎಂದು ಹೇಳಿದರು. ಇನ್ನೂ ಮುಂದುವರೆದು, ಇನ್ನೂ ಮುಂದೆ ನೀವು ದಿನಾ ಇಲ್ಲಿ ಬಂದು ತಬಲಾ ಬಾರಿಸುವುದಾದರೆ ನಿಮಗೆ ದಿನಕ್ಕೆ ಒಬ್ಬೊಬ್ಬರಿಗೆ ಒಂದು ರೂಪಾಯಿ ಕೊಡುತ್ತೇನೆ ಎಂದರು. ಹುಡುಗರಿಗೋ ಆನಂದವೋ ಆನಂದ, ತಾತನ ಮಾತಿಗೆ ಒಪ್ಪಿ. ಪ್ರತಿದಿನ ಬಂದು ತಬಲಬಾರಿಸಿ, ಹಣ ಪಡೆದು ಹೋಗುತಿದ್ದರು.
ಒಂದು ವಾರವಾಯಿತು, ಆ ದಿನ ಹುಡುಗರು ಹಣ ಪಡೆಯಲು ಹೋದಾಗ, ತಾತ “ಮಕ್ಕಳೇ ನನಗೆ ಬರುತಿದ್ದ ಕಾಸು ಕಡಿಮೆಯಾಗಿದೆ. ಇನ್ನೂ ಮುಂದೆ ನಿಮಗೆ ಪ್ರತಿಯೊಬ್ಬರಿಗೂ ಐವತ್ತು ಪೈಸೆ ಮಾತ್ರ ಕೊಡಬಲ್ಲೆ” ಎಂದರು. ಮಕ್ಕಳ ಮುಖ ಸಪ್ಪಗಾಯಿತು, ಆದರೂ ಸಿಕ್ಕಷ್ಟೇ ಲಾಭ ಎಂದು ಒಪ್ಪಿಕೊಂಡರು.
ಮತ್ತೊಂದುವಾರ ಕಳೆಯಿತು, ಹುಡುಗರು ಹಣ ಪಡೆಯಲು ಹೋದಾಗ, ತಾತ, ಮಕ್ಕಳೇ ನಿಮಗೆ ಕಡಿಮೆ ಕಾಸು ಕೊಡಲು ನನಗೂ ಇಷ್ಟವಿಲ್ಲ ಆದರೂ ನನಗೆ ಬರುತಿದ್ದ ಕಾಸು ಮತ್ತೂ ಕಡಿಮೆಯಾಗಿದೆ, ಆದ್ದರಿಂದ ಇನ್ನೂ ಮುಂದೆ ನಿಮಗೆ ಪ್ರತಿಯೊಬ್ಬರಿಗೂ ಇಪ್ಪತ್ತೈದು ಪೈಸೆ ಮಾತ್ರ ಕೊಡಬಲ್ಲೆ ಎಂದರು.
ಆಗ ಮಕ್ಕಳ ಗುಂಪಿನ ನಾಯಕ ಹೇಳಿದ, “ಇಪ್ಪತ್ತೈದು ಪೈಸಾನ, ಅದಕ್ಕೆ ಕಳ್ಳೇಕಾಯಿ ಮಿಠಾಯಿನು ಬರಲ್ಲ, ಹೋಗು ತಾತ, ನಿನ್ನ ಇಪ್ಪತ್ತೈದು ಪೈಸೆಗೋಸ್ಕರ ನಾವು ನಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡೋಕ್ಕಾಗಲ್ಲ. ಇವತ್ತಿನಿಂದ ನಾವು ಇನ್ನೂ ಮುಂದೆ ತಬಲಾ ಬಾರಿಸುವುದಿಲ್ಲ.”
ಮಕ್ಕಳು ಹೊರಡುವಾಗ, ತಾತ ಹೊರಗಡೆ ತುಂಬಾ ಬೇಜಾರಾದಂತೆ ತೋರಿಸಿಕೊಂಡರೂ, ಒಳಗೊಳಗೆ ನಗುತ್ತಿದ್ದರು.

ದೇವರು ತಪ್ಪಿಸಿಕೊಂಡಿದ್ದಾನೆ..

ಇಬ್ಬರು ತುಂಟ ಸಹೋದರರು ತರಲೆ ಮಾಡುವುದರಲ್ಲಿ ಪ್ರಸಿದ್ದಿ. ಊರಿನ ಯಾವುದೇ ತರಲೆ ಕೆಲಸದಲ್ಲಿ ಇಬ್ಬರು ಸಹೋದರರ ಪಾತ್ರವಿದ್ದೆ ಇರುತಿತ್ತು. ಹುಡುಗರ ಅಪ್ಪ ಅಮ್ಮ ಮಕ್ಕಳನ್ನು ಹತೋಟಿಯಲ್ಲಿಡಲು ಮಾಡಿದ ಪ್ರಯತ್ನಗಳೆಲ್ಲಾ ನೀರು ಪಾಲಾಗಿದ್ದವು.
ಹೀಗಿರುವಾಗ ಪಕ್ಕದ ಊರಿಗೆ ಸ್ವಾಮೀಜಿಯೊಬ್ಬರು ಬಂದಿದ್ದು, ಅವರು ಇಂತ ತುಂಟ ಹುಡುಗರಿಗೆ ಬುದ್ದಿ ಕಲಿಸುತ್ತಾರೆಂದು ತಿಳಿದ ಮಕ್ಕಳ ತಾಯಿ, ಸ್ವಾಮೀಜಿಯನ್ನು ನೋಡಲು ಹೋದರು. ಸ್ವಾಮೀಜಿ ತಾಯಿಯ ಮಾತನ್ನೆಲ್ಲ ಕೇಳಿದ ಮೇಲೆ, ತನ್ನ ಬಳಿ ಚಿಕ್ಕ ಮಗನನ್ನು ಕಳುಹಿಸಲು ಹೇಳಿದರು.
ಚಿಕ್ಕ ಹುಡುಗ ಸ್ವಾಮೀಜಿಯನ್ನು ನೋಡಲು ಹೋದ. ಸ್ವಾಮೀಜಿ ಅವನನ್ನು ತನ್ನ ಕೋಣೆಗೆ ಕರೆದುಕೊಂಡು ಹೋದರು. ಅವರ ಕೋಣೆಯಲ್ಲಿ ದೊಡ್ಡದೊಂದು ಮೇಜಿತ್ತು. ಅದರ ಹಿಂದೆ ಸ್ವಾಮೀಜಿ ಕುಳಿತುಕೊಂಡರು. ಕೆಲವು ಕಾಲ ಸ್ವಾಮೀಜಿ ಸುಮ್ಮನಿದ್ದು, ನಂತರ ಹುಡುಗನತ್ತ ಕೈ ಬೊಟ್ಟು ಮಾಡಿ, ದೇವರೆಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಏನು ಮಾತಾಡಲಿಲ್ಲ, ಬದಲಾಗಿ ಬೆರಗು ಗಣ್ಣಿನಿಂದ ಮೇಜಿನ ಕೆಳಗೆ ನೋಡಿದ, ಕೋಣೆಯ ಸುತ್ತ ನೋಡಿದ.
ಸ್ವಾಮೀಜಿ ಮತ್ತೆ ಹುಡುಗನತ್ತ ಕೈ ಬೊಟ್ಟು ಮಾಡಿ, ದೇವರೆಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಮತ್ತೆ ಅದೇ ಬೆರಗು ಗಣ್ಣಿನಿಂದ ಮೇಜಿನ ಕೆಳಗೆ ನೋಡಿದ, ಕೋಣೆಯ ಸುತ್ತ ನೋಡಿದ. ಏನು ಮಾತಾಡಲಿಲ್ಲ.
ಸ್ವಾಮೀಜಿ ಈ ಬಾರಿ ಹುಡುಗನ ಮೂಗಿನ ಹತ್ತಿರ ತೋರು ಬೆರಳನ್ನು ಕೊಂಡೊಯ್ದು, ತುಸು ಗಡುಸಾದ ದನಿಯಲ್ಲಿ, ದೇವರೆಲ್ಲಿದ್ದಾನೆ? ಎಂದು ಕೇಳಿದರು. ಹೆದರಿಕೆಯಿಂದ ಹುಡುಗ ಸ್ವಾಮೀಜಿ ಕೋಣೆಯಿಂದ ಹೊರಗೆ ಓಡಿದ, ಮನೆ ಸಿಗುವವರೆಗೂ ನಿಲ್ಲಲಿಲ್ಲ.
ಮನೆಗೆ ಹೋದವನು, ಅಣ್ಣನನ್ನು ತಮ್ಮ ರೂಮಿನಲ್ಲಿದ್ದ ಗುಪ್ತ ಜಾಗಕ್ಕೆ ಕರೆದೊಯ್ದ, “ನಾವೀಗ ದೋ…ಡ್ಡ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀವೆ”. ಅದಕ್ಕೆ ಅಣ್ಣ, “ಯಾವುದೋ ಅದು ದೋ…ಡ್ಡ ತೊಂದರೆ” ಎಂದ.
ಅದಕ್ಕೆ ತಮ್ಮನೆಂದ “ದೇವರು ತಪ್ಪಿಸಿಕೊಂಡಿದ್ದಾನೆ, ಅದಕ್ಕೆ ನಾವು ಕಾರಣವಂತೆ”!!

ಕಪ್ಪೆ ರಾಜಕುಮಾರಿಯ ಕತೆ

ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಗಂಡು ಮಕ್ಕಳು. ರಾಜಕುಮಾರರು ಮದುವೆ ವಯಸ್ಸಿಗೆ ಬಂದಾಗ ಅವರಿಗೆ ಮದುವೇ ಮಾಡಲು ರಾಜ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ. ಮೂರೂ ರಾಜಕುಮಾರರಿಗೂ ಒಂದೊಂದು ಬಿಲ್ಲು ಬಾಣ ಕೊಟ್ಟು, ಯಾರು ಯಾರ ಮನೆಗೆ ಬಾಣವನ್ನು ಕಳಿಸುತ್ತಾರೊ ಅವರ ಮನೆಯಿಂದ ಹೆಣ್ಣನ್ನು ತಂದು ಮದುವೆ ಮಾಡಲಾಗುವುದು ಎಂದು ಹೇಳುತ್ತಾನೆ.
ಮೊದಲನೇ ರಾಜಕುಮಾರ ಅಗಸರ ಮನೆಗೆ ಬಾಣ ಕಳಿಸುತ್ತಾನೆ. ಸರಿ ಅವನಿಗೆ ಅಗಸರ ಮಗಳೊಡನೆ ಮದುವೆ ಅಗುತ್ತದೆ. ಎರಡನೇ ರಾಜಕುಮಾರ ಕುಂಬಾರನ ಮನೆಗೆ ಬಾಣ ಕಳಿಸುತ್ತಾನೆ. ಅವನಿಗೆ ಕುಂಬಾರನ ಮಗಳೊಡನೆ ಮದುವೆ ಆಗುತ್ತದೆ. ಕಿರಿಯ ರಾಜಕುಮಾರ ಕಪ್ಪೆ ಮನೆಗೆ ಬಾಣ ಕಳಿಸುತ್ತಾನೆ. ರಾಜ ಆಡಿದ ಮಾತಿನಂತೆ, ಕೊನೆಯವನಿಗೆ ಕಪ್ಪೆಯ ಮಗಳೊಡನೆ ಮದುವೆ ಮಾಡುತ್ತಾನೆ. ಕಿರಿಯ ರಾಜಕುಮಾರ ಕಪ್ಪ್ದೆಗಾಗಿ ಒಂದು ಗೂಡನ್ನು ಕಟ್ಟಿ ಅಲ್ಲಿ ಕಪ್ಪೆ ವಾಸಿಸುವಂತೆ ಎರ್ಪಾಡು ಮಾಡುತ್ತಾನೆ.
ಒಮ್ಮೆ ರಾಜ ತನ್ನ ಮೂರು ಪುತ್ರರನ್ನು ಕರೆದು ನಾಳೆ ನೀವೆಲ್ಲರೂ ನಿಮ್ಮ ಹೆಂಡತಿಯರಿಂದ ಒಂದು ಮಗುವಿನ ಉಡುಗೆಯನ್ನು ತಯಾರಿಸಿಕೊಂಡು ಬರಬೇಕು ಎಂದು ಅಪ್ಪಣೆಯಿತ್ತ. ಅಗಸ ಮತ್ತು ಕುಂಬಾರನ ಮಗಳು ಹೇಗೊ ತಮಗೆ ತಿಳಿದ ಹಾಗೆ ಉಡುಗೆಯನ್ನು ತಯಾರಿಸಿದರು. ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ ಮಕ್ಕಳ ಉಡುಪನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಉಡುಪನ್ನು ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಉಡುಗೆ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಸುಂದರ ಉಡುಗೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ. ಸಂತೋಷದಿಂದ ನಾಳೆ ಆಸ್ತಾನಕ್ಕೆ ಉಡುಗೆಯನ್ನು ಕೊಂಡೊಯುತ್ತಾನೆ. ರಾಜ ಮೊದಲಿಗೆ ಅಗಸನ ಮಗಳ ಉಡುಗೆ ನೋಡುತ್ತಾನೆ, ಅಷ್ಟೇನೂ ನಯಗಾರಿಕೆಯಿಲ್ಲದ ಉಡುಗೆ ಎಂದು ತಿರಸ್ಕರಿಸುತ್ತಾನೆ. ನಂತರ ಕುಂಬಾರನ ಮಗಳ ಉಡುಗೆಯನ್ನು ಕೂಡ ತಿರಸ್ಕರಿಸುತ್ತಾನೆ. ಕಿರಿಯ ರಾಜಕುಮಾರ ಉಡುಗೆಯನ್ನು ತೋರಿದಾಗ ರಾಜನ ಕಣ್ಣುಗಳು ಅಗಲವಾಗಿ, ವಾಹ್ ಎಂಬ ಉದ್ಗಾರದೊಂದಿಗೆ ಕಿರಿಯ ಮಗನನ್ನು ಆಲಂಗಿಸಿ ಕಪ್ಪೆ ತಯಾರಿಸಿದ ಉಡುಗೆ ಅತ್ಯುತ್ತಮವಾದುದೆಂದು ಬಹುಮಾನವನ್ನು ಕೊಡುತ್ತಾನೆ.
ಇನ್ನೂ ಕೆಲವು ದಿನಗಳಾದ ಮೇಲೆ ರಾಜ ಮತ್ತೆ ತನ್ನ ಮೂರು ಪುತ್ರರನ್ನು ಕರೆದು, ಮಕ್ಕಳೆ ನಿಮ್ಮ ಹೆಂಡಂದಿರಿಂದ ಒಂದು ಒಳ್ಲೆಯ ಸಿಹಿತಿಂಡಿಯನ್ನು ಮಾಡಿಸಿ ತನ್ನಿ ಎಂದು ಅಪ್ಪಣೆ ಕೊಡುತ್ತಾನೆ. ಈ ಬಾರಿ ಅಗಸನ ಮಗಳು ಮತ್ತು ಕುಂಬಾರನ ಮಗಳು ಕಪ್ಪೆ ಇಷ್ಟು ಸುಂದರವಾಗಿ ಉಡುಗೆ ಹೊಲಿದುಕೊಟ್ಟಿದೆ ಎಂದರೆ, ಈ ಬಾರಿ ಕಪ್ಪೆ ಏನು ಮಾಡುವುದೋ ಅದನ್ನೇ ನಾವೂ ಮಾಡುವುದು ಎಂದು ತೀರ್ಮಾನಿಸಿ ಕಪ್ಪೆ ಸಿಹಿತಿಂಡಿ ಮಾಡುವುದನ್ನೇ ಕಾಯುತ್ತಾ ಕುಳಿತಿದ್ದರು.
ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಮತ್ತೇ ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಈ ಬಾರಿ ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ ಸಿಹಿ ತಿಂಡಿಯನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಸಿಹಿ ತಿಂಡಿ ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಸಿಹಿತಿಂಡಿ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಕೇಕಿನಿಂದ ಮಾಡಿದ ಅರಮನೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ ಜೊತೆಗೆ ಸಂತೋಷವೂ ಅಯಿತು. ಕಪ್ಪೆ ಅಗಸನ ಮಗಳು ಕುಂಬಾರನ ಮಗಳು ನನ್ನ ಸಿಹಿತಿಂಡಿಯನ್ನು ಕಾಪಿ ಮಾಡಲು ಕಾಯುತ್ತಿರುವುದು ತಿಳಿದು ಎಲ್ಲರಿಗೂ ಕಾಣುವಂತೆ ಕೇಕ್ ಮಾಡಲು ಶುರುಮಾಡಿತು. ಮರೆಯಲ್ಲಿ ಅವಿತು ಅಗಸನ ಮಗಳು ಕುಂಬಾರನ ಮಗಳು ಕಪ್ಪೆ ಮಾಡುವರೀತಿಯಲ್ಲಿ ತಾವು ಕೇಕ್ ಮಾಡಲು ಪ್ರಾರಂಭಿಸಿದರು. ಎಲ್ಲಾಮಾಡಿ ಬೇಯಿಸುವಮುನ್ನ ಕಪ್ಪೆ ಸ್ವಲ್ಪ ಹಸುವಿನ ಸೆಗಣಿಯನ್ನು ಕೇಕ್ ಮಿಶ್ರಣಕ್ಕೆ ಹಾಕಿತು. ಅಗಸನ ಮಗಳು ಕುಂಬಾರನ ಮಗಳು ಸಗಣಿಯ ಬಗ್ಗೆ ಸ್ವಲ್ಪ ಅನುಮಾನಿತರಾದರೂ, ಅದನ್ನು ಹಾಕದೇ ಹೊದರೆ ಕೇಕ್ ಚೆನ್ನಾಗಿ ಬರುವುದಿಲ್ಲವೇನೊ ಎಂದುಕೊಂಡು ತಾವು ಸೆಗಣಿಯನ್ನು ಹಾಕಿ ಕೇಕ್ ಮುಗಿಸಿದರು.
ಮಾರನೇ ದಿನ ಮೊದಲು ಅಗಸನ ಮಗಳ ಕೇಕ್ ತರಿಸಿದ ರಾಜ, ಅದರಿಂದ ಬರುತಿದ್ದ ಸೆಗಣಿ ವಾಸನೇ ನೊಡಿಯೆ ಕೇಕನ್ನು ಕಸದ ಬುಟ್ಟಿಗೆ ಎಸೆದ. ಕುಂಬಾರನ ಮಗಳ ಕೇಕ್ ಕೂಡಾ ಕಸದ ಬುಟ್ಟಿ ಸೇರಿತು. ಕಪ್ಪೆಯ ಕೇಕ್ ನೊಡಿ ರಾಜ ಸಂತೊಷಭರಿತನಾಗಿ ಕಿರಿಯಮಗನಿಗೆ ಮತ್ತೆ ಬಹುಮಾನ ಕೊಟ್ಟ.
ಸ್ವಲ್ಪ ದಿನಗಳ ನಂತರ ರಾಜ ಮತ್ತೆ ತನ್ನ ಮೂರು ಪುತ್ರರನ್ನು ಕರೆದು, ಮಕ್ಕಳೆ ನಾಳೆ ನಿಮ್ಮ ಹೆಂಡತಿಯರು ಸಭಾಂಗಣದಲ್ಲಿ ನೃತ್ಯ ಮಾಡಬೇಕು ಎಂದು ಅಪ್ಪಣೆ ಕೊಟ್ಟನು.ಅಗಸನ ಮಗಳು ಮತ್ತು ಕುಂಬಾರನ ಮಗಳು ತಮಗೆ ಕುಣಿಯುವುದಕ್ಕೆ ಬರದೇ ಇದ್ದರೂ ನಮಗೆ ಕಾಲುಗಳಿವೆ ಮನಸ್ಸಿಗೆ ಬಂದ ಹಾಗೆ ಕುಣಿಯುವುದು ಎಂದು ನಿರ್ಧರಿಸಿದರು. ಕಿರಿಯ ರಾಜಕುಮಾರ ಎಂದಿನಂತೆ ಮನಗೆ ಬಂದು ಅಳುತ್ತಾ ಕುಂತನು. ಕಪ್ಪೆ ತನ್ನ ಗೂಡಿನಿಂದ ಹೊರಬಂದು ಮತ್ತೆ ಯಾಕೆ ಅಳುತಿದ್ದೀಯ ಎಂದಿತು. ಅದಕ್ಕೆ ರಾಜಕುಮಾರನು ’ನೀನು ಬಟ್ಟೆಯನ್ನು ಹೊಲಿದೆ, ಸಿಹಿತಿಂಡಿಯನ್ನೂ ಮಾಡಿದೆ ಆದರೆ ನನ್ನ ತಂದೆ ನಾಳೆ ನೀನು ನೃತ್ಯ ಮಾಡಬೇಕೆಂದು ಹೇಳಿದ್ದಾರೆ ಏನು ಮಾಡುವುದೆಂದು ತಿಳಿಯದೆ ಅಳುತಿದ್ದೇನೆ” ಎಂದ ಹೇಳಿದ. ಇದನ್ನು ಕೇಳಿದ ಕಪ್ಪೆ, ಹೇಳಿತು, ನಾನು ಒಬ್ಬ ಋಶಿಯ ಶಾಪದಿಂದಾಗಿ ಕಪ್ಪೆ ಯಾಗಿದ್ದೇನೆ, ನಾಳೆ, ನೃತ್ಯದ ಸಮಯಕ್ಕೆ ಸರಿಯಾಗಿ ನಾನು ಚಿನ್ನದ ರಥದಲ್ಲಿ ಬಂದಿಳಿದು ನೃತ್ಯವನ್ನು ಮಾಡುತ್ತೆನೆ ಆದರೆ ಒಂದನ್ನು ನೆನಪಿನಲ್ಲಿಡು ನನ್ನ ಈ ಕಪ್ಪೆ ಯ ಗೂಡನ್ನು ಮಾತ್ರಾ ಸುಟ್ಟು ಹಾಕಬೇಡ. ಇದನ್ನು ಕೇಳಿದ ರಾಜಕುಮಾರನ ಸಂತೊಷಕ್ಕೆ ಎಣೆಯೆಇಲ್ಲ.
ಮಾರನೇದಿನ, ಕುಂಬಾರನ ಮಗಳು ನೃತ್ಯ ಮಾಡಲು ಬಂದಳು, ಅವಳ ನೃತ್ಯವನ್ನು ನೋಡಿ ಎಲ್ಲರೂ ನಗಲಾರಂಬಿಸಿದರು. ಇದೇ ಗತಿ ಅಗಸನ ಮಗಳಿಗೂ ಅಯಿತು. ಆಗ ಭೂಮಿ ನಡುಗಿದಂತಾಗೆ ಎಲ್ಲರೂ ಸದ್ದು ಬಂದ ಕಡೆ ತಿರುಗಿದಾಗ ಬಂಗಾರದ ರಥದಿಂದ ಸುಂದರ ರಾಜಕುಮಾರಿ ಸಭಾಂಗಣಕ್ಕೆ ಬಂದಳು. ಮೂರನೇ ರಾಜಕುಮಾರ ಇವಳೇ ನನ್ನ ಹೆಂಡತಿ ಎಂದು ತಿಳಿಸಿದಾಗ ಎಲ್ಲರಿಗೂ ಸಂತೊಷವಾಯಿತು. ಕಪ್ಪೆ ರಾಜಕುಮಾರಿ ಅದ್ಭುತವಾಗಿ ನೃತ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದಳು. ಮೂರನೇ ರಾಜಕುಮಾರ ಅತಿಯಾದ ಸಂತೋಷದಿಂದ ಮನೆಗೆ ಹೊದ ಅಲ್ಲಿದ್ದ ಕಪ್ಪೆ ಗೂಡನ್ನು ನೋಡಿ, ಇನ್ನು ಇದು ಯಾಕೆ ಬೇಕು ಎಂದು ಅದನ್ನು ಬೆಂಕಿ ಹಚ್ಚಿ ಸುಟ್ಟುಬಿಟ್ಟನು. ಅತಿಯಾದ ಸಂತೋಷದಲ್ಲಿ ಕಪ್ಪೆ ಹೇಳಿದ್ದ ಮಾತು ಮರೆತುಬಿಟ್ಟಿದ್ದನು. ಮನೆಗೆ ಹಿಂದಿರುಗಿದ ರಾಜಕುಮಾರಿ ಕಪ್ಪೆ ಗೂಡು ಸುಟ್ಟಿದ್ದನ್ನು ನೊಡಿದ ತಕ್ಷಣ ಪಾರಿವಾಳವಾಗಿ ಹಾರಿಹೊದಳು.
ರಾಜಕುಮಾರನ ಸಂತೋಷ ಒಮ್ಮೆಲೆ ಇಳಿದು ದುಃಖಪೂರಿತನಾದನು. ರಾಜಕುಮಾರಿಯನ್ನು ಬಿಟ್ಟಿರಲಾರದೆ, ಅವಳನ್ನು ಹುಡಿಕಿ ತರುವೇನೆಂದು ರಾಜಕುಮಾರ ಹೊರಟನು. ಬಹಳಾ ದೂರ ನಡೆದಮೇಲೆ ಅವನಿಗೆ ಆಯಾಸವಾಗಿತ್ತು. ಹತ್ತಿರದಲ್ಲೇ ಒಂದು ಮನೆ ಕಾಣಿಸಿತು, ಒಳಗೆ ಹೊದ ರಾಜಕುಮಾರ ಅಲ್ಲಿ ಮುರು ಮೊಳದುದ್ದದ ಮೂಗಿರುವ ಒಬ್ಬ ಅಜ್ಜಿ ಕುಳಿತಿದ್ದುದು ಕಂಡು ತಿನ್ನಲು ಎನಾದರು ಸಿಗುವುದೇ ಎಂದು ಕೇಳಿದ. ಆ ಅಜ್ಜಿ ಅತನನ್ನು ಕೂಡಿಸಿ ಊಟ ಬಡಿಸಿದಳು. ಅಜ್ಜಿ ನೀನು ಯಾರಪ್ಪ ಎಂದು ಕೇಳಿದಾಗ, ರಾಜಕುಮಾರ ತನ್ನ ಕತೆಯನ್ನು ಸವಿಸ್ತಾರವಾಗಿ ಹೇಳಿದ್ದನ್ನು ಕೇಳಿದ ಅಜ್ಜಿ, ನನಗೆ ನಿನ್ನ ಹೆಂಡತಿ ಎಲ್ಲಿದ್ದಾಳೆ ಎಂಬುದು ತಿಳಿದಿದೆ ಎಂದಳು. ಆಶ್ಚರ್ಯದಿಂದ ಎಲ್ಲಿದ್ದಾಳೆ ಹೇಳಜ್ಜಿ ಎಂದು ದಂಬಾಲು ಬಿದ್ದ. ಆಗ ಅಜ್ಜಿ, ನೀನು ಏಳು ಸಮುದ್ರವನ್ನು ದಾಟಿ ನಂತರ ಏಳು ಬೆಟ್ಟವನ್ನು ಏರಿ, ಏಳನೇ ಬೆಟ್ಟದ ಮೇಲೆ ಒಂದು ಮರವಿರುತ್ತದೆ, ಅ ಮರವನ್ನು ಕಡಿದರೆ ನಿನಗೆ ಒಂದು ಪೆಟ್ಟಿಗೆ ಕಾಣುತ್ತದೆ, ಪೆಟ್ಟಿಗೇ ತೆರೆದರೆ ಒಂದು ಮೊಲವಿರುತ್ತದೆ, ಹುಷಾರಿಅಗಿರು ಮೊಲ ಓಡಿಹೊಗಬಹುದು. ಮೊಲವನ್ನು ಕತ್ತರಿಸಿದರೆ ಒಳಗೆ ಒಂದು ಪಾರಿವಾಳವಿರುತ್ತದೆ. ಹುಷಾರಾಗಿ ಪಾರಿವಾಳವನ್ನು ಹಿಡಿದಿಕೊ, ಪಾರಿವಾಳವನ್ನು ಕತ್ತರಿಸಿದರೆ ಒಂದು ಮೀನಿರುತ್ತದೆ. ಹುಷಾರಾಗಿ ಮೀನನ್ನು ಹಿಡಿದುಕೊ. ಮೀನನ್ನು ಕತ್ತರಿಸಿದರೆ ಒಳಗೆ ಒಂದು ಮೊಟ್ಟೆ ಕಾಣಿಸುತ್ತದೆ. ಆ ಮೊಟ್ಟೆಯನ್ನು ಒಡೆದರೆ ಒಳಗೆ ಒಂದು ಅರಮನೆಯಿರುತ್ತದೆ. ಅರಮನೆಯ ಮುಂದೆ ಓಂದು ಸೂಜಿಯಿರುತ್ತದೆ ಅದನ್ನು ಎತ್ತಿಕೊಂಡು ಅರಮನೆ ಒಳಗೆ ಹೊದರೆ ಅಲ್ಲಿ ನಿನ್ನ ಹೆಂಡತಿಯನ್ನು ಒಬ್ಬ ರಾಕ್ಷಸ ಚಾಟಿಯಿಂದ ಹೊಡಿಯುತ್ತಿರುತ್ತಾನೆ, ನಿನ್ನಲ್ಲಿರುವ ಸೂಜಿಯಲ್ಲಿ ರಾಕ್ಷಸನ ಪ್ರಾಣವಿರುತ್ತದೆ. ಸೂಜಿಯನ್ನು ಮುರಿ ರಾಕ್ಷಸ ಸಾಯುತ್ತಾನೆ. ನಂತರ ನೀನು ನಿನ್ನ ಹೆಂಡತಿಯನ್ನು ಮನೆಗೆ ಕರೆದೊಯ್ಯಬಹುದು. ಎಲ್ಲವನ್ನೂ ಕೇಳಿದ ರಾಜಕುಮಾರ ಅಜ್ಜಿಯನ್ನು ಕೇಳಿದ ಏಳನೇ ಬೆಟ್ಟದ ಮೇಲೆ ಎಷ್ಟೊಂದು ಮರಗಳಿರುತ್ತವೆ ಅದರಲ್ಲಿ ನೀನು ಹೇಳಿದ ಮರವನ್ನು ಹೇಗೆ ಕಂಡುಹಿಡಿಯುವುದು ಎಂದು ಕೇಳಿದಾಗ ಅಜ್ಜಿ, ನಾನು ನಿನಗೆ ಒಂದು ಮಂತ್ರಿಸಿದ ದಾರದ ಉಂಡೆಯನ್ನು ಕೊಡುತ್ತೇನೆ, ಅ ಉಂಡೆಯನ್ನು ಏಳನೇ ಬೆಟ್ಟದ ಮೇಲೆ ಬಿಡು, ಅ ಉಂಡೆ ಉರುಳಿಕೊಂಡು ಹೋಗಿ ನಿನಗೆ ಮರವನ್ನು ತೋರಿಸುತ್ತದೆ. ಅತಿಯಾದ ಸಂತೋಷದಿಂದ ಅಜ್ಜಿಗೆ ನಮಸ್ಕ್ಚರಿಸಿ ರಾಜಕುಮಾರ ಹೊರಡುತ್ತಾನೆ.
ಹೋಗುವಾಗ ದಾರಿಯಲ್ಲಿ ಒಂದು ಮೊಲವನ್ನು ಒಂದು ನರಿ ಅಟ್ಟಿಸಿಕೊಂಡು ಹೋಗುತಿದ್ದುದನ್ನು ನೋಡಿ ರಾಜಕುಮಾರ ನರಿಯನ್ನು ಹೆದರಿಸಿ ಒಡಿಸಿ ಮೊಲವನ್ನು ರಕ್ಷಿಸಿದನು. ಮೊಲ ರಾಜನಿಗೆ ನೀನು ನನ್ನ್ನ ಪ್ರಾಣವನ್ನು ಉಳಿಸಿದ್ದರಿಂದ ನಿನ್ನ ಕಷ್ಟಕಾಲದಲ್ಲ್ನಿ ನನ್ನನ್ನು ನೆನೆಸಿಕೊ, ನಾನು ಬಂದು ನಿನಗೆ ಸಹಾಯ ಮಾಡುತ್ತೇನೇ ಎಂದು ಹೇಳಿತು. ರಾಜಕುಮಾರ ಹಾಗೆ ಅಗಲಿ ಎಂದು ತನ್ನ ಪ್ರಯಾಣ ಮುಂದುವರೆಸಿದ. ಸ್ವಲ್ಪ ದೂರದಲ್ಲಿ ಅತಿಯಾದ ಗಾಳಿಯಿಂದಾಗಿ ಒಂದು ಪಾರಿವಾಳದ ಗೂಡು ಮರದ ಮೇಲಿಂದ ಕೆಳಗೆ ಬಿದ್ದು, ಪಾರಿವಾಳಗಳು ದುಃಖಿತಗೊಂಡಿರುವುದನ್ನು ನೋಡಿ ರಾಜಕುಮಾರ, ಪಾರಿವಾಳದ ಗೂಡನ್ನು ಸುರಕ್ಷಿತವಾಗಿ ಎತ್ತಿ ಮರದಮೇಲಿಟ್ಟನು. ಅದನ್ನು ನೋಡಿದ ಪಾರಿವಾಳಗಳು ಸಂತೋಷದಿಂದ, ನಮ್ಮ ಕಷ್ಟಕಾಲದಲ್ಲಿ ನೀನು ಸಹಾಯಮಾಡಿದ್ದೀಯ ನಿನ್ನ ಕಷ್ಟಕಾಲದಲ್ಲಿ ನಮ್ಮನ್ನು ನೆನೆಸಿಕೊ, ನಾವು ಬಂದು ನಿನಗೆ ಸಹಾಯಮಾಡುತ್ತೇವೆ ಎಂದವು. ಹಾಗೆ ಆಗಲಿ ಎಂದು ರಾಜಕುಮಾರ ತನ್ನ ಪ್ರಯಾಣಮುಂದುವರೆಸಿದ. ತಾನು ದಾಟಬೇಕಾಗಿದ್ದ ಏಳು ಸಮುದ್ರಗಳಲ್ಲಿ ಮೊದಲನೇ ಸಮುದ್ರದ ಸಮೀಪ ಬಂದಾಗ, ಕೆಲವು ಮೀನುಗಳು ದಡದಲ್ಲಿ ನೀರಿನಿಂದ ಹೊರಗಡೆ ಒದ್ದಾಡುತ್ತಿರುವುದನ್ನು ಕಂಡು ರಾಜಕುಮಾರ ಎಲ್ಲ ಮೀನುಗಳನ್ನು ಎತ್ತಿ ಸಮುದ್ರದಲ್ಲಿ ಬಿಟ್ಟನು. ಆಗ ಆ ಮೀನುಗಳು ರಾಜಕುಮಾರನಿಗೆ, ನಿನ್ನ ಕಷ್ಟಕಾಲದಲ್ಲಿ ನಮ್ಮನ್ನು ನೆನೆಸಿಕೊ ನಾವು ಬಂದು ಸಹಾಯ ಮಾಡುತ್ತೇವೆ ಎಂದು ಹೇಳಿದವು.
ನಂತರ, ರಾಜಕುಮಾರ ಅಜ್ಜಿ ಹೇಳಿದಂತೆ, ಏಳು ಸಮುದ್ರ ದಾಟಿ ಮತ್ತೆ ಏಳು ಬೆಟ್ಟಗಳನ್ನು ಹತ್ತಿ, ಕೊನೆಯ ಬೆಟ್ಟದ ಮೇಲೆ ಅಜ್ಜಿ ಕೊಟ್ಟಿದ್ದ ದಾರದ ಉಂಡೆಯನ್ನು ಉರುಳಿಬಿಟ್ಟನು. ಆ ದಾರದ ಉಂಡೆ ಉರುಳಿಕೊಂಡು ಹೊಗಿ ಒಂದು ಮರದ ಕೆಳಗೆ ನಿಂತು ಕೊಂಡಿತು. ಆಗ ರಾಜಕುಮಾರನು ಆ ಮರವನ್ನು ಕತ್ತರಿಸಿದನು, ಓಳಗೆ ಅಜ್ಜಿ ಹೇಳಿದ್ದಂತೆ ಒಂದು ಪೆಟ್ಟಿಗೆ ಇತ್ತು. ಪೆಟ್ಟಿಗೆಯ ಮುಚ್ಚಳವನ್ನು ತೇರೆದಾಗ, ಅಲ್ಲಿದ್ದ ಮೊಲ ಚಂಗನೆ ಎಗರಿ ಕಾಡಿನೊಳಗೆ ಓಡಿಹೊಯಿತು. ಆಗ ರಾಜಕುಮಾರನಿಗೆ ಏನು ಮಾಡಬೇಕೊ ತಿಳಿಯದೆ ದುಃಖಿತನಾದನು, ತಟ್ಟನೆ, ತಾನು ಸಹಾಯ ಮಾಡಿದ್ದ ಮೊಲಗಳ ನೆನೆಪಾಗಿ, ಅವುಗಳನ್ನು ನೆನೆಸಿಕೊಂಡನು. ಆಗ ಮೊಲಗಳು ಬಂದು, ನಮ್ಮಿಂದ ಏನಾಗಬೇಕಾಗಿತ್ತು ಎಂದು ಕೇಳಿದವು. ಅಗ ರಾಜಕುಮಾರನು, ಪೆಟ್ಟಿಗೆಯಲ್ಲಿದ್ದ ಮೊಲವನ್ನು ಹಿಡಿದು ತಂದು ಕೊಡಬೇಕಾಗಿ ಕೇಳಿಕೊಂಡನು. ಆಗ ಮೊಲಗಳು ಹೋಗಿ ರಾಜಕುಮಾರನಿಗೆ ಬೇಕಿದ್ದ ಮೊಲವನ್ನು ಹಿಡಿದುಕೊಂಡು ಬಂದವು. ರಾಜಕುಮಾರ ಮೊಲಗಳಿಗೆ ಧನ್ಯವಾದವನ್ನು ಹೇಳಿ, ಮೊಲವನ್ನು ಕತ್ತರಿಸಿದನು, ಆಗ ಒಳಗಿದ್ದ ಪಾರಿವಾಳವು ರೊಯ್ಯನೆ ಹಾರಿಹೊಯಿತು. ಆಗ ರಾಜಕುಮಾರನಿಗೆ ಏನು ಮಾಡಬೇಕೊ ತಿಳಿಯದೆ ದುಃಖಿತನಾದನು, ತಟ್ಟನೆ, ತಾನು ಸಹಾಯ ಮಾಡಿದ್ದ ಪಾರಿವಾಳಗಳ ನೆನೆಪಾಗಿ, ಅವುಗಳನ್ನು ನೆನೆಸಿಕೊಂಡನು. ಆಗ ಪಾರಿವಾಳಗಳು ಬಂದು, ನಮ್ಮಿಂದ ಏನಾಗಬೇಕಾಗಿತ್ತು ಎಂದು ಕೇಳಿದವು. ಅಗ ರಾಜಕುಮಾರನು, ಮೊಲದೊಳಗಿದ್ದ ಪಾರಿವಾಳವು ಹಾರಿಹೊಗಿದೆ ಅದನ್ನು ಹಿಡಿದು ತಂದು ಕೊಡಬೇಕಾಗಿ ಕೇಳಿಕೊಂಡನು.ಆಗ ಪಾರಿವಾಳಗಳು ಹಾರಿ ಹೋಗಿ ರಾಜಕುಮಾರನಿಗೆ ಬೇಕಿದ್ದ ಪಾರಿವಾಳವನ್ನು ಹಿಡಿದುಕೊಂಡು ಬಂದವು. ರಾಜಕುಮಾರ ಪಾರಿವಾಳಗಳಿಗೆ ಧನ್ಯವಾದವನ್ನು ಹೇಳಿ, ಪಾರಿವಾಳವನ್ನು ಕತ್ತರಿಸಿದನು, ಅದರೊಳಗೆ ಅಜ್ಜಿ ಹೇಳಿದ್ದ ಹಾಗೆ ಒಂದು ಮೊಟ್ಟೆಯಿತ್ತು. ಅದನ್ನು ಒಡೆದನು, ಮೊಟ್ಟೆಯೊಳಗೆ ಒಂದು ಅರಮನೆಯಿತ್ತು. ಅರಮನೆಯ ಮುಂದೆ ಓಂದು ಸೂಜಿ ಬಿದ್ದಿದ್ದುದನ್ನು ನೊಡಿ ಅಜ್ಜಿ ಹೇಳಿದಂತೆ ಅದನ್ನು ಎತ್ತಿಕೊಂಡು ಅರಮನೆ ಒಳಗೆ ಹೋದನು. ಅಲ್ಲಿ ಒಬ್ಬ ರಾಕ್ಷಸ ತನ್ನ ಹೆಂಡತಿಯಾದ ಕಪ್ಪೆ ರಾಜಕುಮಾರಿಯನ್ನು ಹೊಡೆಯುತಿದ್ದುದನ್ನು ನೋಡಿ, ಆ ರಾಕ್ಷಸನಿಗೆ ತನ್ನ ಹೆಂಡತಿಯನ್ನು ಬಿಟ್ಟು ಬಿಡು ಎಂದು ಹೇಳಿದನು, ಅದಕ್ಕೆ ರಾಕ್ಷಸ ನನಗೆ ಹೇಳಲು ನೀನು ಯಾರು ಎಂದಾಗ, ರಾಜಕುಮಾರನು ತನ್ನ ಕೈಯಲ್ಲ್ಲಿದ್ದ ಸೂಜಿಯನ್ನು ತೊರಿಸಿದನು, ಆಗ ರಾಕ್ಷಸ ಹೆದರಿ, ನನಗೇನು ಮಾಡಬೇಡ ನಿನ್ನ ಹೆಂಡತಿಯನ್ನು ಬಿಟ್ಟುಬಿಡುತ್ತೇನೆ ಎಂದು ಅಂಗಲಾಚಿದ. ರಾಜಕುಮಾರ ಆ ಸೂಜಿಯನ್ನು ಮುರಿದು ರಾಕ್ಷಸನ್ನು ಸಾಯಿಸಿ ತನ್ನ ಹೆಂಡತಿಯನ್ನು ಕರೆದುಕೊಂಡು ತನ್ನ ಅರಮನೆಗೆ ಹಿಂದುರಿಗೆ, ಸುಖವಾಗಿ ನೂರು ವರ್ಷಗಳಕಾಲ ಬದುಕಿದನು.

Tuesday, January 13, 2009

ಸಂಕ್ರಾತಿಯ ಹಾರ್ದಿಕ ಶುಭಾಶಯಗಳು

ನಿಮ್ಮೆಲ್ಲರಿಗೂ ಮಕರ ಸಂಕ್ರಾತಿಯ ಹಾರ್ದಿಕ ಶುಭಾಶಯಗಳು