Thursday, January 15, 2009

ದೇವರು ತಪ್ಪಿಸಿಕೊಂಡಿದ್ದಾನೆ..

ಇಬ್ಬರು ತುಂಟ ಸಹೋದರರು ತರಲೆ ಮಾಡುವುದರಲ್ಲಿ ಪ್ರಸಿದ್ದಿ. ಊರಿನ ಯಾವುದೇ ತರಲೆ ಕೆಲಸದಲ್ಲಿ ಇಬ್ಬರು ಸಹೋದರರ ಪಾತ್ರವಿದ್ದೆ ಇರುತಿತ್ತು. ಹುಡುಗರ ಅಪ್ಪ ಅಮ್ಮ ಮಕ್ಕಳನ್ನು ಹತೋಟಿಯಲ್ಲಿಡಲು ಮಾಡಿದ ಪ್ರಯತ್ನಗಳೆಲ್ಲಾ ನೀರು ಪಾಲಾಗಿದ್ದವು.
ಹೀಗಿರುವಾಗ ಪಕ್ಕದ ಊರಿಗೆ ಸ್ವಾಮೀಜಿಯೊಬ್ಬರು ಬಂದಿದ್ದು, ಅವರು ಇಂತ ತುಂಟ ಹುಡುಗರಿಗೆ ಬುದ್ದಿ ಕಲಿಸುತ್ತಾರೆಂದು ತಿಳಿದ ಮಕ್ಕಳ ತಾಯಿ, ಸ್ವಾಮೀಜಿಯನ್ನು ನೋಡಲು ಹೋದರು. ಸ್ವಾಮೀಜಿ ತಾಯಿಯ ಮಾತನ್ನೆಲ್ಲ ಕೇಳಿದ ಮೇಲೆ, ತನ್ನ ಬಳಿ ಚಿಕ್ಕ ಮಗನನ್ನು ಕಳುಹಿಸಲು ಹೇಳಿದರು.
ಚಿಕ್ಕ ಹುಡುಗ ಸ್ವಾಮೀಜಿಯನ್ನು ನೋಡಲು ಹೋದ. ಸ್ವಾಮೀಜಿ ಅವನನ್ನು ತನ್ನ ಕೋಣೆಗೆ ಕರೆದುಕೊಂಡು ಹೋದರು. ಅವರ ಕೋಣೆಯಲ್ಲಿ ದೊಡ್ಡದೊಂದು ಮೇಜಿತ್ತು. ಅದರ ಹಿಂದೆ ಸ್ವಾಮೀಜಿ ಕುಳಿತುಕೊಂಡರು. ಕೆಲವು ಕಾಲ ಸ್ವಾಮೀಜಿ ಸುಮ್ಮನಿದ್ದು, ನಂತರ ಹುಡುಗನತ್ತ ಕೈ ಬೊಟ್ಟು ಮಾಡಿ, ದೇವರೆಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಏನು ಮಾತಾಡಲಿಲ್ಲ, ಬದಲಾಗಿ ಬೆರಗು ಗಣ್ಣಿನಿಂದ ಮೇಜಿನ ಕೆಳಗೆ ನೋಡಿದ, ಕೋಣೆಯ ಸುತ್ತ ನೋಡಿದ.
ಸ್ವಾಮೀಜಿ ಮತ್ತೆ ಹುಡುಗನತ್ತ ಕೈ ಬೊಟ್ಟು ಮಾಡಿ, ದೇವರೆಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಮತ್ತೆ ಅದೇ ಬೆರಗು ಗಣ್ಣಿನಿಂದ ಮೇಜಿನ ಕೆಳಗೆ ನೋಡಿದ, ಕೋಣೆಯ ಸುತ್ತ ನೋಡಿದ. ಏನು ಮಾತಾಡಲಿಲ್ಲ.
ಸ್ವಾಮೀಜಿ ಈ ಬಾರಿ ಹುಡುಗನ ಮೂಗಿನ ಹತ್ತಿರ ತೋರು ಬೆರಳನ್ನು ಕೊಂಡೊಯ್ದು, ತುಸು ಗಡುಸಾದ ದನಿಯಲ್ಲಿ, ದೇವರೆಲ್ಲಿದ್ದಾನೆ? ಎಂದು ಕೇಳಿದರು. ಹೆದರಿಕೆಯಿಂದ ಹುಡುಗ ಸ್ವಾಮೀಜಿ ಕೋಣೆಯಿಂದ ಹೊರಗೆ ಓಡಿದ, ಮನೆ ಸಿಗುವವರೆಗೂ ನಿಲ್ಲಲಿಲ್ಲ.
ಮನೆಗೆ ಹೋದವನು, ಅಣ್ಣನನ್ನು ತಮ್ಮ ರೂಮಿನಲ್ಲಿದ್ದ ಗುಪ್ತ ಜಾಗಕ್ಕೆ ಕರೆದೊಯ್ದ, “ನಾವೀಗ ದೋ…ಡ್ಡ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀವೆ”. ಅದಕ್ಕೆ ಅಣ್ಣ, “ಯಾವುದೋ ಅದು ದೋ…ಡ್ಡ ತೊಂದರೆ” ಎಂದ.
ಅದಕ್ಕೆ ತಮ್ಮನೆಂದ “ದೇವರು ತಪ್ಪಿಸಿಕೊಂಡಿದ್ದಾನೆ, ಅದಕ್ಕೆ ನಾವು ಕಾರಣವಂತೆ”!!

No comments: